ಲಸಿಕೆಗಾಗಿ ಮಲೇಬೆನ್ನೂರಿಗೆ ಆಗಮಿಸಿದ ದಾವಣಗೆರೆ ಜನರು

ಮಲೇಬೆನ್ನೂರು, ಮೇ 6- ಕೋವಿಡ್ ಲಸಿಕೆಗಾಗಿ ದಾವಣಗೆರೆ ನಗರದ ಜನರು ದೇವರಬೆಳಕೆರೆ ಮತ್ತು ಮಲೇಬೆನ್ನೂರು ಆರೋಗ್ಯ ಕೇಂದ್ರಗಳಿಗೆ ಗುರುವಾರ ಜಮಾಯಿಸಿದ್ದರಿಂದ ಕೆಲ ಹೊತ್ತು ಗೊಂದಲ ಸೃಷ್ಟಿ ಆಯಿತು.

ದೇವರಬೆಳಕೆರೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 100 ಕ್ಕೂ ಹೆಚ್ಚು ಜನರು ದಾವಣಗೆರೆಯಿಂದ ಲಸಿಕೆ ಹಾಕಿಸಿ ಕೊಳ್ಳಲು ಆಗಮಿಸಿದಾಗ ದೇವರ ಬೆಳಕೆರೆಯ ಕೆಲವರು ವಿರೋಧ ವ್ಯಕ್ತಪ ಡಿಸಿದರು. ನಮ್ಮೂರಿನ ಜನರಿಗೆ ಇನ್ನೂ ಲಸಿಕೆ ಸಿಕ್ಕಿಲ್ಲ. ದಾವಣಗೆರೆಯಿಂದ ಇಲ್ಲಿಗೆ ಬಂದು ಲಸಿಕೆ ಹಾಕಿಸಿಕೊಂಡರೆ ನಮ್ಮ
ಗತಿ ಏನು? ಎಂದು ಪ್ರಶ್ನಿಸಿದರು.

ಇದರಿಂದಾಗಿ ಸ್ವಲ್ಪ ಹೊತ್ತು ಗೊಂದಲ ಉಂಟಾಗಿ ಲಸಿಕೆ ಹಾಕುವುದು ತಡವಾಯಿ ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಮೊದಲು ದೇವರಬೆಳಕೆರೆ ಜನರಿಗೆ ಆದ್ಯತೆ ನೀಡಿ, ನಂತರ ದಾವಣಗೆರೆಯಿಂದ ಆಗಮಿಸಿದ್ದ ಸ್ವಲ್ಪ ಜನರಿಗೆ ಲಸಿಕೆ ಹಾಕಿಸಿದರು.

ಮಲೇಬೆನ್ನೂರು ಸಮುದಾಯ ಆರೋಗ್ಯ ಕೇಂದ್ರದಲ್ಲೂ ದಾವಣಗೆರೆಯ ಕೆಲವರು 2ನೇ ಡೋಸ್ ಪಡೆದುಕೊಂಡರು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡವರು  2ನೇ ಡೋಸ್‌ಗಾಗಿ ಸುಮಾರು 450 ಕ್ಕೂ ಹೆಚ್ಚು ಜನ ಪ್ರತಿನಿತ್ಯ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.

ಕಳೆದ 15 ದಿನಗಳಿಂದ ಕೋವ್ಯಾಕ್ಸಿನ್‌ ಲಸಿಕೆ ಬಂದಿಲ್ಲ. ಕೋವಿಶೀಲ್ಡ್ ಲಸಿಕೆ ಮಾತ್ರ ಬಂದಿರುತ್ತದೆ. ಶನಿವಾರ ಅಥವಾ ಸೋಮವಾರ ಕೋವ್ಯಾಕ್ಸಿನ್ ಲಸಿಕೆ ಬರುವ ನಿರೀಕ್ಷೆಯಲ್ಲಿದ್ದೇವೆ. ಬಂದ ತಕ್ಷಣ 2ನೇ ಡೋಸ್‌ಗಾಗಿ ಕಾಯುತ್ತಿರುವವರಿಗೆ ಮೊದಲ ಆದ್ಯತೆ ನೀಡುವುದಾಗಿ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ತಿಳಿಸಿದ್ದಾರೆ.

Leave a Reply

Your email address will not be published.