ಭಾರೀ ಮಳೆ: ಹರಿಹರ ತಾಲ್ಲೂಕಿನಲ್ಲಿ ಭತ್ತದ ಬೆಳೆಗೆ ಹಾನಿ

ಭಾರೀ ಮಳೆ: ಹರಿಹರ ತಾಲ್ಲೂಕಿನಲ್ಲಿ ಭತ್ತದ ಬೆಳೆಗೆ ಹಾನಿ

ಮಲೇಬೆನ್ನೂರು, ಮೇ 6- ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹರಿಹರ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಭತ್ತದ ಬೆಳೆ ನೆಲ ಕಚ್ಚಿದ್ದು, ಅಪಾರ ಹಾನಿಯಾಗಿದೆ ಎಂದು ವರದಿಯಾಗಿದೆ.

ಮಲೇಬೆನ್ನೂರು ಹೋಬಳಿಯ ಕುಣೆಬೆಳಕೆರೆ-08, ಗುಳದಹಳ್ಳಿ-50, ಮಲ್ಲನಾಯ್ಕನಹಳ್ಳಿ-50, ಹುಲುಗಿನ ಹೊಳೆ-25 ಮತ್ತು ಎಳೆಹೊಳೆಯಲ್ಲಿ 45 ಎಕರೆ ಸೇರಿ ಒಟ್ಟು 250 ಎಕರೆ ಭತ್ತದ ಬೆಳೆ ನೆಲಕಚ್ಚಿದೆ ಎಂದು ಉಪ ತಹಶೀಲ್ದಾರ್ ಆರ್. ರವಿ ಅವರು ಹರಳಹಳ್ಳಿ, ಗುಳದಹಳ್ಳಿಗೆ ಭೇಟಿ ನೀಡಿ, ಬೆಳೆಹಾನಿ ಪರಿಶೀಲಿಸಿದ ನಂತರ ಪತ್ರಕರ್ತರಿಗೆ ಮಾಹಿತಿ ನೀಡಿದರು.

ಕುಣೆಬೆಳಕೆರೆ ವೃತ್ತದ ಗ್ರಾಮ ಲೆಕ್ಕಾಧಿಕಾರಿ ದೇವರಾಜ್, ಎಳೆಹೊಳೆ ಗ್ರಾಮ ಲೆಕ್ಕಾಧಿಕಾರಿ ಮಂಜುಳಾ ಅವರು ಭತ್ತದ ಬೆಳೆ ನೆಲ ಕಚ್ಚಿರುವ ಕುರಿತು ಸ್ಥಳ ಪರಿಶೀಲಿಸಿ, ಮಾಹಿತಿ ನೀಡಿದ್ದಾರೆ ಎಂದು ರವಿ ತಿಳಿಸಿದರು. ಕೃಷಿ ಇಲಾಖೆಯ ಇನಾಯತ್, ಗ್ರಾಮಲೆಕ್ಕಾಧಿಕಾರಿ ಅಣ್ಣಪ್ಪ ಈ ವೇಳೆ ಹಾಜರಿದ್ದರು.

ಹರೀಶ್ ಭೇಟಿ: ಮಳೆಯಿಂದ ಬೆಳೆ ಹಾನಿಯಾಗಿರುವ ಕೆ. ಬೇವಿನಹಳ್ಳಿ, ಸತ್ಯನಾರಾಯಣ ಕ್ಯಾಂಪ್, ಸಾಲಕಟ್ಟೆ ಮತ್ತಿತರೆ ಗ್ರಾಮಗಳಿಗೆ ಗುರುವಾರ ಬೆಳಿಗ್ಗೆ ಮಾಜಿ ಶಾಸಕ ಬಿ.ಪಿ. ಹರೀಶ್ ಭೇಟಿ ನೀಡಿ, ರೈತರ ಕಷ್ಟ ಆಲಿಸಿದರು. 

ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಸಹಾಯಕ ಕೃಷಿ ನಿರ್ದೇಶಕ ಗೋವರ್ಧನ್ ಅವರಿಗೆ ದೂರವಾಣಿ ಮೂಲಕ ಮಾತನಾಡಿದ ಹರೀಶ್, ಮಳೆಯಿಂದಾಗಿ  ಹರಿಹರ ತಾಲ್ಲೂಕಿನಲ್ಲಿ ಭತ್ತದ ಬೆಳೆ ನೆಲಕಚ್ಚಿ ರೈತರಿಗೆ ನಷ್ಟವಾಗಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಬೆಳೆಹಾನಿ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡಿ ಪರಿಹಾರ ನೀಡುವಂತೆ ಮನವಿ ಮಾಡಲಾಗುವುದು. ಈ ಕುರಿತು ಡಿಸಿ ಅವರ  ಬಳಿ ಮಾತನಾಡುವುದಾಗಿ ತಿಳಿಸಿದರು. 

Leave a Reply

Your email address will not be published.