ಖಾತ್ರಿ ಯೋಜನೆಯಡಿ ಕೊಣಚಕಲ್ ಐತಿಹಾಸಿಕ ಪುಷ್ಕರಣೆಯ ಸ್ವಚ್ಛತೆ

ಖಾತ್ರಿ ಯೋಜನೆಯಡಿ ಕೊಣಚಕಲ್ ಐತಿಹಾಸಿಕ ಪುಷ್ಕರಣೆಯ ಸ್ವಚ್ಛತೆ

ಕೊಣಚಕಲ್ ರಂಗನಾಥಸ್ವಾಮಿ ದೇವಸ್ಥಾನದ ಹತ್ತಿರವಿರುವ 150 ಅಡಿಗಿಂತ ಹೆಚ್ಚು ಆಳ ಇರುವ ಐತಿಹಾಸಿಕ ಪುಷ್ಕರಣೆಯಲ್ಲಿ ನೂರಾರು ಕೂಲಿ ಕಾರ್ಮಿಕರು ಸಾಮಾಜಿಕ ಅಂತರದೊಂದಿಗೆ ಕೆಲಸ ನಿರ್ವಹಿಸುತ್ತಿರುವುದು.

ಜಗಳೂರು, ಮೇ 6- ಕೊರೊನಾ ಹಿನ್ನೆಲೆಯಲ್ಲಿ ಇಡೀ ರಾಜ್ಯವೇ ತಲ್ಲಣಗೊಂಡು ಜನರ ಜೀವನ ಕಷ್ಟಕರವಾಗಿದ್ದ ಸಂದರ್ಭದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕೂಲಿ ಕಾರ್ಮಿಕರಿಗೆ ನೆರವಾಗಿವೆ ಎಂದು ದಾವಣಗೆರೆ ಜಿ.ಪಂ. ಉಪ ಕಾರ್ಯದರ್ಶಿ ಆನಂದ್ ಹೇಳಿದರು.

ತಾಲ್ಲೂಕಿನ ಗುತ್ತಿದುರ್ಗ ಗ್ರಾಮ ಪಂಚಾಯಿತಿಗೆ ಸೇರಿರುವ ಕೊಣಚಕಲ್ ರಂಗನಾಥಸ್ವಾಮಿ ದೇವಸ್ಥಾನದ ಹತ್ತಿರವಿರುವ 150 ಅಡಿಗಿಂತ ಹೆಚ್ಚು ಆಳ  ಇರುವ ಐತಿಹಾಸಿಕ ಪುಷ್ಕರಣೆಯ ಹೂಳು ತೆಗೆದು ಸ್ವಚ್ಛತಾ ಕಾರ್ಯ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಿಸಿ, ನೂರಾರು ಕೂಲಿ ಕಾರ್ಮಿಕರು ಸಾಮಾಜಿಕ ಅಂತರದೊಂದಿಗೆ ಕೆಲಸ ನಿರ್ವಹಿಸುತ್ತಿರುವುದು ಶ್ಲ್ಯಾಘನೀಯ ಎಂದರು. 

ಬದು ನಿರ್ಮಾಣ, ಹೂಳು ತೆಗೆ ಯಲು  ಆದ್ಯತೆ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೂರೈವತ್ತಕ್ಕೂ ಅಧಿಕ ಅಡಿ ಆಳ ಇರುವ ಐತಿಹಾಸಿಕ ಪುಷ್ಕರಣೆಯ ಹೂಳು ತೆಗೆದು ಸ್ವಚ್ಛತೆ ಗೊಳಿಸುತ್ತಿರುವುದು ಶ್ಲಾಘನೀಯ. ಜೊತೆಗೆ ರಸ್ತೆ ನಿರ್ಮಾಣ, ಸುತ್ತಲೂ ಗಿಡಗಳನ್ನು ಹಾಕಿ ಪ್ರವಾಸಿ ತಾಣದಂತೆ ಮಾಡಬೇಕು. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ,  ಮಾಸ್ಕ್ ಧರಿಸುವ ಮೂಲಕ ಕೆಲಸ ನಿರ್ವಹಿಸುವಂತೆ ಕೂಲಿ ಕಾರ್ಮಿಕರಿಗೆ ಸೂಚಿಸಿದರು.

 ರೈತರ ಜಮೀನುಗಳಲ್ಲಿ ವೈಯಕ್ತಿಕ ಕಾಮಗಾರಿಯಾಗಿ ಬದು ನಿರ್ಮಾಣ ವನ್ನು ಹೆಚ್ಚು ಹೆಚ್ಚು ಮಾಡಿಕೊಳ್ಳಬೇಕು. ಹೂಳು ತೆಗೆಯಲು, ಬದು ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸಿಮೆಂಟ್ ರಸ್ತೆ ಕಾಮಗಾರಿಗಳನ್ನು ಸದ್ಯ ಸ್ಥಗಿತಗೊಳಿಸಿ ಹೆಚ್ಚಿನ ಕೂಲಿ ಸಿಗುವಂತಹ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕೂಲಿ ಕಾರ್ಮಿಕರು ಆಯಾ ಗ್ರಾಮ ಪಂಚಾಯ್ತಿಗಳಲ್ಲಿ ಕೆಲಸ ಮಾಡಬಹುದು ಎಂದರು.

ತಾಲ್ಲೂಕು ಕಾರ್ಯನಿರ್ವ ಹಣಾಧಿಕಾರಿ ಮಲ್ಲನಾಯ್ಕ ಮಾತನಾಡಿ, ತಾಲ್ಲೂಕಿನ ಗುತ್ತಿದುರ್ಗ ಸೇರಿದಂತೆ 22 ಗ್ರಾ.ಪಂ.ಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳು ತೆಗೆಯುವುದು, ರೈತರ ಜಮೀನುಗಳಲ್ಲಿ ಬದು ನಿರ್ಮಾಣದಂತಹ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದರು. 

 ಪಿಡಿಓ ಬಸವರಾಜಪ್ಪ ಮಾತನಾಡಿ ಐತಿಹಾಸಿಕ ಪುಷ್ಕರಣೆಯ ಹೂಳು ತೆಗೆದು ಸ್ವಚ್ಛತೆ ಮಾಡಿದ ಅಂದಾಜು ವೆಚ್ಚ  10 ಲಕ್ಷ ರೂ., ಎಡ ಭಾಗದ ದಂಡೆಯ ಅಭಿವೃದ್ಧಿಗೆ ಅಂದಾಜು 10 ಲಕ್ಷ ರೂ., ಗೋಕಟ್ಟೆ ಹೂಳೆತ್ತಲು 3 ಲಕ್ಷ ರೂ, ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ. ವೆಚ್ಚದಲ್ಲಿ  ಕಾಮಗಾರಿಗಳನ್ನು ಖಾತ್ರಿ ಯೋಜನೆಯಡಿ ತೆಗೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನಿಡಿದರು. 

ಈ ಸಂದರ್ಭದಲ್ಲಿ ತಾ.ಪಂ. ಎ.ಡಿ. ಶಿವಕುಮಾರ್, ಪಂಚಾಯ್ತಿ ಗ್ರಾ.ಪಂ. ಅಧ್ಯಕ್ಷ ಬಸವನಗೌಡ. ಸಿದ್ದಿಕಿ ಇತರರು ಉಪಸ್ಥಿತರಿದ್ದರು.

Leave a Reply

Your email address will not be published.