ಸರಿಗನ್ನಡ ಮತ್ತು ಗುಣಮಟ್ಟ ಪರಮಪೂಜ್ಯರ ನಿಲುವು…

ಸರಿಗನ್ನಡ ಮತ್ತು ಗುಣಮಟ್ಟ ಪರಮಪೂಜ್ಯರ ನಿಲುವು…

`ಸರಿಗನ್ನಡ’ದ ಬಗ್ಗೆ ಜಾಗೃತಿ ಮೂಡಿಸುವ ಕಾಯಕ ಪ್ರಾರಂಭವಾಗಿದೆ. ಕನ್ನಡ ಸರಳ – ಸುಂದರ ಭಾಷೆ. ಕರ್ನಾಟಕದ ವಿವಿಧ ಭಾಗದ ಜನರು ವಿಶಿಷ್ಟ ಶೈಲಿಯ ಭಾಷಾ ಸೊಗಡನ್ನು ಹೊಂದಿದ್ದಾರೆ. ಆದರೆ ಕನ್ನಡದ ಗ್ರಂಥ ಭಾಷೆಯನ್ನು ಬರವಣಿಗೆಯಲ್ಲಿ ಬಳಸುವಾಗ, ಉಚ್ಛಾರ ಮಾಡುವಾಗ ತಪ್ಪು ಉಂಟಾಗುವುದನ್ನು ಸಿದ್ಧಗಂಗಾ ಮಠದ ಲಿಂಗೈಕ್ಯ ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಸಹಿಸುತ್ತಿರಲಿಲ್ಲ.

ಪರಮ ಪೂಜ್ಯರು ಈ ವಿಚಾರವನ್ನು ಬಹಳ ಹಿಂದೆ ಅವರ ಶ್ರೀವಾಣಿಯಲ್ಲಿ ವ್ಯಕ್ತಪಡಿಸಿದ್ದಾರೆ. 

ಮೊನ್ನೆ ಒಂದು ಅಪ್ಲಿಕೇಷನ್ ತಂದುಕೊಟ್ಟರು, ಕೊಟ್ಟಾತ ಒಬ್ಬ ನಿವೃತ್ತ ಶಿಕ್ಷಕ, ಮೂವತ್ತು ವರ್ಷಗಳ ಸೇವೆ ಸಲ್ಲಿಸಿ ವಿಶ್ರಾಂತ ಜೀವನಕ್ಕೆ ಕಾಲಿಡುತ್ತಿರುವ ವ್ಯಕ್ತಿ. ಮುಖ್ಯೋಪಾಧ್ಯಾಯನಾಗಿ ಪ್ರೌಢಶಾಲೆಯ ಆಡಳಿತಾಂಗದಲ್ಲಿ ಕೆಲಸ ನಿರ್ವಹಿಸಿದ ಶಿಕ್ಷಕ. ಅವನು ಕೊಟ್ಟ ಅರ್ಜಿಯ ವಿಷಯವನ್ನಿಲ್ಲಿ ಪ್ರಸ್ತಾಪಿಸುತ್ತಿಲ್ಲ. ಆ ಅರ್ಜಿಯ ಭಾಷಾ-ದೋಷಗಳನ್ನು ಕುರಿತು ಹೇಳಬೇಕಾಗಿದೆ. `ನನ್ನ ಹಣ್ಣನಿಗೆ’ ಎಂದು ಪದ ಬಳಸಿದ್ದು ಕಂಡುಬಂದಿತು. 

ಇನ್ನೊಂದು ಇಂಗ್ಲಿಷ್ ಎಂ.ಎ ಮಾಡುತ್ತಿರುವ ಅಭ್ಯರ್ಥಿಯ ಅಪ್ಲಿಕೇಷನ್, ಅದರ ಮೇಲೆ ಕಣ್ಣಾಡಿಸಿದಾಗ ಇದು ಯಾವ ಇಂಗ್ಲಿಷ್ ಎಂಬ ಭಾವನೆ ಬಂದಿತು. `I am here by informing’ ಎಂದು ಪ್ರಾರಂಭಿಸಿ ಅನಂತರ `Requesting’ ಎಂದು ಸೇರಿಸಿ ವಾಕ್ಯ ಪ್ರಾರಂಭ ಮಾಡಿದ್ದು ಕಾಣಬಂದಿತು. ಮತ್ತೊಂದು ಸಮಯದಲ್ಲಿ ವಿದ್ಯಾರ್ಥಿಗಳ ಅಟೆಂಡೆನ್ಸ್ ರಿಜಿಸ್ಟರ್ ನೋಡುವ ಸಂದರ್ಭದಲ್ಲಿ ವಿದ್ಯಾರ್ಥಿ `ಸಿವರುದ್ರಯ್ಯ’, ‘ಮುಖ್ಯೋಪಾಧಾಯ’ ಎನ್ನುವ ಕಾಗುಣಿತಗಳ ದೋಷಗಳನ್ನು ಕಾಣುವಂತಾಯಿತು. ಇವು ಶಿಕ್ಷಣ ಕ್ಷೇತ್ರದಲ್ಲಿ ಕಾಣಬರುತ್ತಿರುವುದಾದರೆ ಅನ್ಯ ಕ್ಷೇತ್ರಗಳ ಹಣೆಬರಹವೂ ಇದೇ ಆಗಿದೆ. 

ಸಂಸ್ಕೃತ ಪ್ರೌಢವಾದ, ಜ್ಞಾನನಿಷ್ಠವಾದ ಬೌದ್ಧಿಕ ಭಾಷೆ. ಅಲ್ಲಿನ ಶ್ಲೋಕಗಳ ಅಧ್ಯಯನ ನಿರ್ದಿಷ್ಟವಾಗಿರುತ್ತದೆ. ತಪ್ಪಿಲ್ಲದ ಉಚ್ಛಾರ ಅತಿ ಮುಖ್ಯ. ಪೂಜಾ ಸಂದರ್ಭದಲ್ಲಿ ಕೆಲ ಮಂತ್ರಗಳನ್ನು ಪಠಿಸುವ ಪುಣ್ಯಾತ್ಮರು ಅಪಶಬ್ಧವನ್ನೇ ಎತ್ತಿದ ಕಂಠದಲ್ಲಿ ಉಗ್ಗಡಿಸುವುದನ್ನು ಗಮನಿಸಬಹುದು. ವಸ್ತುಗಳ ಉತ್ಪಾದನೆಯಲ್ಲಿ, ಮಾಡುವ ಕೆಲಸದಲ್ಲಿ, ಕಲಿಯುವ ಹಂತದ ಗುಣಕ್ಕೆ ಪ್ರಾಮುಖ್ಯತೆ ಇಲ್ಲವಾಗಿದೆ. ಪರೀಕ್ಷೆಗಳಲ್ಲಿ ಫಲಿತಾಂಶ ಇಳಿಮುಖವಾಗಿದೆ, ಏರುಮುಖವಾಗಿದೆ ಎಂದರೆ ಅಪಮಾರ್ಗದಲ್ಲಿ ನಡೆದಿರಬೇಕೆಂಬುದು ಬಹಿರಂಗ ಸತ್ಯವಾಗಿದೆ. ಚುನಾವಣೆಗಳಲ್ಲಿ ಪ್ರಚಂಡ ಬಹುಮತ ಗಳಿಸಲಾಯಿತು ಎನ್ನುವಾಗ ನಡೆದಿರುವ ಭ್ರಷ್ಟಾಚಾರವನ್ನು ಮರೆಯುವಂತಿಲ್ಲ. ಕೃಷಿ ಕೃತ್ಯ ಕಾಯಕವೊಂದೇ ಭ್ರಷ್ಟ ಮುಕ್ತವಾದ ಪವಿತ್ರ ದುಡಿಮೆಯೆಂಬ ಸದ್ಭಾವನೆಯಿತ್ತು. ಅಲ್ಲಿಯೂ ಪ್ರಾಮಾಣಿಕವಾದ ದುಡಿಮೆ ಕಾಣಬರುತ್ತಿಲ್ಲ. ಪ್ರಕೃತಿ ಸೋಮಾರಿಗಳಿಗೆ, ಸೋಗಲಾಡಿತನಕ್ಕೆ ಒಲಿಯಲಾರಳು. ಗುಣಮಟ್ಟವನ್ನು ನಿರ್ಧಾರ ಮಾಡುವ ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಆದರೆ ಅಲ್ಲಿಯೂ ನ್ಯೂನತೆಗಳಿವೆಯೆನ್ನಲಾಗುತ್ತದೆ. ನಮ್ಮ ಪೂಜ್ಯ ಗುರುಗಳು ಬಳಸುತ್ತಿದ್ದ ಕೆಲವು ವಸ್ತುಗಳು ನಮ್ಮ ಬಳಿ ಇನ್ನೂ ಸುಭದ್ರ ಸ್ಥಿತಿಯಲ್ಲಿವೆ. 

ನಮ್ಮಲ್ಲಿ ಅಂಬಲಗೆರೆ ನಂಜುಂಡಯ್ಯ ಎಂಬ ಅಧ್ಯಾಪಕರೊಬ್ಬರಿದ್ದರು. ಅವರು ನೆಲಮಂಗಲದಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸಂಸ್ಕೃತ ಬೋಧಿಸುವ ಅವಕಾಶ ಲಭ್ಯವಾಗಿತ್ತು. ಆದರೆ ಅವರಿಗೆ ಸಂಸ್ಕೃತ ಜ್ಞಾನ ಅಷ್ಟಾಗಿರಲಿಲ್ಲ. ಅವರು ಶ್ರೀಮಠಕ್ಕೆ ಶನಿವಾರ, ಭಾನುವಾರ ಬಂದು ಇಲ್ಲಿ ರುದ್ರಾರಾಧ್ಯ ಶರ್ಮ, ಬಿ. ಗಂಗಪ್ಪ ಅವರಿಂದ ಪಾಠ ಹೇಳಿಸಿಕೊಂಡು ಸೋಮವಾರ ಶಾಲೆಗೆ ಹೋಗಿ ಬೋಧಿಸುತ್ತಿದ್ದರು. ಅವರೊಮ್ಮೆ ಶಾಲಾ ತನಿಖಾಧಿಕಾರಿಗಳಾದ ಗೋಪಾಲ್ ಎಂಬುವರ ಮುಂದೆ ಬೋಧಿಸಬೇಕಾಯಿತು. ಬೋಧನಾ ವಿಧಾನ ಗಮನಿಸಿದ ತನಿಖಾಧಿಕಾರಿಗಳು ನಂಜುಂಡಯ್ಯನವರಿಗೆ `ಬೋಧನಾಚಾರ್ಯ’ ಎಂದು ಪ್ರಶಂಸಿಸಿ ಮಾತನಾಡಿದರು. ಗುಣಮಟ್ಟವನ್ನು ಕಾಪಾಡಿಕೊಳ್ಳು ವುದರ ಹಿಂದೆ ಶ್ರದ್ಧೆ, ಪ್ರಾಮಾಣಿಕತೆ, ತಾನು ಪ್ರತಿನಿಧಿಸುತ್ತಿರುವ ಸಮಾಜ ಪ್ರಜ್ಞೆ ಇರಬೇಕಾಗುತ್ತದೆ. ಕೊನೆಯದಾಗಿ ಒಂದು ಮಾತು. ಯಾರೂ ತಪ್ಪು ತಿಳಿಯಬಾರದು. ‘ಗುಣಮಟ್ಟ’ ಎಲ್ಲರಿಗೂ ಅನ್ವಯವಾಗುವ ಮಾತು’. (ಕೃಪೆ:ಅಮೃತ ಗಂಗಾ)


ಜಸ್ಟಿನ್ ಡಿ’ಸೌಜ
siddagangaoffice@gmail.com

Leave a Reply

Your email address will not be published.