ಮುಂದಿನ ದಿನಮಾನಗಳಲ್ಲಿ ನಾಟಕ ಕಲೆಗೆ ಭವಿಷ್ಯ

ಮುಂದಿನ ದಿನಮಾನಗಳಲ್ಲಿ ನಾಟಕ ಕಲೆಗೆ ಭವಿಷ್ಯ

ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಬಾ.ಮ. ಬಸವರಾಜಯ್ಯ

ದಾವಣಗೆರೆ, ಮಾ.27- ಮುಂದಿನ ದಿನಮಾನಗಳಲ್ಲಿ ಭವಿಷ್ಯವಿರುವುದು ನಾಟಕ ಕಲೆಗಳಿಗೇ ವಿನಃ ಸಿನಿಮಾ, ಕಿರುತೆರೆಗಳಿಗಲ್ಲ ಎಂದು ಹಿರಿಯ ರಂಗಕರ್ಮಿ ಬಾ.ಮ. ಬಸವರಾಜಯ್ಯ ತಿಳಿಸಿದರು.

ಅವರು, ಇಂದು ಸಂಜೆ ನಗರದ ವನಿತಾ ಸಮಾಜದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಭೂಮಿಕಾ-ವನಿತಾ ರಂಗವೇದಿಕೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಾವ್ಯಕ್ಕೆ ಅಭಿನಯದ ಸ್ಪರ್ಶ ಬಿದ್ದಾಗ ಅರ್ಥ ಬರಲು ಸಾಧ್ಯ. ಆದ್ದರಿಂದ ನಾಟಕಗಳ ಸ್ಪರ್ಶದ ಮುಖೇನ ಜನಸಾಮಾನ್ಯರಿಗೆ ಸಂದೇಶ ನೀಡಲಾಗುತ್ತಿತ್ತು. ನಾಟಕಗಳಲ್ಲಿನ ಸಂದೇಶವನ್ನು ಬದುಕಿನಲ್ಲಿ ರೂಢಿಸಿಕೊಳ್ಳುವಂತಹ ಕಾಲವಿತ್ತು. ರಂಗಭೂಮಿ ಕಲೆಯು ಮನರಂಜನೆಗೆ ಮಾತ್ರ ಸೀಮಿತವಾಗದೇ, ಜೀವನದಲ್ಲಿ ನೈತಿಕತ ಮೌಲ್ಯ, ಸಂಸ್ಕಾರ, ಸಂಸ್ಕೃತಿಯನ್ನು ಬಿತ್ತುತ್ತಿದೆ. ಇದನ್ನು ಕೇವಲ ಭಾರತೀಯ ನಾಟಕ ಪರಂಪರೆಯಲ್ಲಿ ಕಾಣಲು ಸಾಧ್ಯ. ಹಿಂದೆ ಗ್ರಾಮೀಣ ಭಾಗದಲ್ಲಿ ರಂಗಭೂಮಿ ಕಲೆಗೆ ಮತ್ತು ಕಲಾವಿದರಿಗೆ ಗೌರವಾದರ ಸಿಗುತ್ತಿತ್ತು ಎಂದು ಹೇಳಿದರು.

ರಂಗಭೂಮಿ ಕಲೆಯು ಗಟ್ಟಿ ಮತ್ತು ಜೀವಂತ ಕಲೆಯಾಗಿದ್ದು, ಈ ಕಲೆಯು ಪ್ರಸ್ತುತ ಮರು ಚೇತನ ಪಡೆದುಕೊಳ್ಳುತ್ತಿದೆ. ಈ ಕಲೆಯು ಕೊನೆಯವರೆಗೂ ಜೀವಂತಿಕೆ ಪಡೆಯುವ ಮೂಲಕ ನೈಜ ಕಲೆಯನ್ನು ಗಟ್ಟಿಗೊಳಿಸುತ್ತದೆ. ಕಿರುತೆರೆ, ಸಿನಿಮಾಗಳು ಇದರಿಂದ ಹೊರತಾಗಿವೆ. ರಂಗಾಸಕ್ತರು, ಜನರಿಗೆ ರಂಗ ಕಲೆಯ ಮಹತ್ವದ ಅರಿವಾಗುತ್ತಿದೆ ಎಂದರು.

ಸುಸಜ್ಜಿತ ಬಯಲು ರಂಗ ಮಂದಿರಕ್ಕೆ ಪ್ರಯತ್ನ 

ಈಗಾಗಲೇ ನಗರದಲ್ಲಿ ನಿರ್ಮಾಣವಾಗುತ್ತಿರುವ ರಂಗ ಮಂದಿರವು ರಂಗ ಮಂದಿರದಂತಿಲ್ಲ. ಅದನ್ನು ರೈಲ್ವೇ ಗೋದಾಮಿನಂತೆ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ, ನಗರದಲ್ಲಿ ಸುಸಜ್ಜಿತ ರಂಗಮಂದಿರದ ಕೊರತೆ ಎದ್ದು ಕಾಣುತ್ತಿದೆ. ಶಿವಮೊಗ್ಗದ ಕುವೆಂಪು ರಂಗ ಮಂದಿರ, ಬೆಂಗಳೂರಿನ ಕಲಾಕ್ಷೇತ್ರದಂತೆ ಸುಸಜ್ಜಿತ ರಂಗಮಂದಿರದ ಅಗತ್ಯತೆ ಇದ್ದು, ಈ ನಿಟ್ಟಿನಲ್ಲಿ ಕಳೆದ 1 ವರ್ಷದಿಂದ ಪ್ರಯತ್ನ ನಡೆದಿದ್ದು, ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯ ಜಂಟಿಯಾಗಿ ಸುಸಜ್ಜಿತ ಬಯಲು ರಂಗ ಮಂದಿರ ನಿರ್ಮಾಣಕ್ಕೆ
ರೂಪು-ರೇಷೆ ಮಾಡಲಾಗುತ್ತಿದ್ದು, ಕಾರ್ಯಗತಕ್ಕೆ ತರಲು ಶೇ.99ರಷ್ಟು ಸಿದ್ಧತೆಗಳು ಮುಗಿದಿವೆ.

ರಂಗಭೂಮಿಯು ನಿಜವಾದ ಕಲಾವಿದರನ್ನು ತಯಾರಿಸಲಿದ್ದು, ರಂಗಭೂಮಿಯಿಂದ ತಯಾರಾಗಿ ಕಿರುತೆರೆ, ಸಿನಿಮಾಗಳಲ್ಲಿ ನಟಿಸುತ್ತಿರುವ ಕಲಾವಿದರ ಕಲೆಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ. ಅದೇ ಕಿರುತೆರೆ, ಸಿನಿಮಾಗಳಲ್ಲಿ ನಟಿಸುವ ಕಲಾವಿದರು ಕಲೆ ಕರಗತ ಮಾಡಿಕೊಳ್ಳಲು ರಂಗಭೂಮಿಗೆ ಹೆಜ್ಜೆ ಇಡುತ್ತಿದ್ದಾರೆಂದರು.

ನಾಟಕ ಪರಂಪರೆಯಲ್ಲಿ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ನಡುವೆ ವಿವಾದದ ಬದಲು, ಎರಡರ ಸಮ್ಮಿಲನವಾದಾಗ ಜನರಿಗೆ ಸಂದೇಶ ತಲುಪಿಸುವಲ್ಲಿ ಯಶಸ್ಸು ಕಾಣಬಹುದು ಎಂದ ಅವರು, ಮಕ್ಕಳಿಗೆ ಓದುವುದರ ಜೊತೆಗೆ ರಂಗಭೂಮಿಯ ಹವ್ಯಾಸ ಬೆಳೆಸಬೇಕು. ಆಗ ಅವರಲ್ಲಿ ಚುರುಕುತನ ಹೆಚ್ಚಲಿದೆ. ಪ್ರಪಂಚದ ಜ್ಞಾನವೂ ಸಹ ಬರುತ್ತದೆ. ಹಾಗಾಗಿ ಅವರಿಗೆ ಸಾಂಸ್ಕೃತಿಕ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಅವರನ್ನು ನಾಟಕ ಕಲೆಗೆ ತೊಡಗಿಸುವುದು ಸೂಕ್ತ ಎಂದು ಕಿವಿಮಾತು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಅರಳಗುಪ್ಪಿ ಮಾತನಾಡಿ, ನಾಟಕ ಪ್ರೇಕ್ಷಕರ ಸ್ಪಂದನೆಯ ಮೇಲೆ ನಿಂತಿದೆ. ರಂಗಕಲೆ ಮನುಷ್ಯನ ನೋವು-ಬೇಸರವನ್ನು ದೂರ ಮಾಡುವುದರ ಜೊತೆಗೆ, ಸಮಾಜದ ಓರೆ-ಕೋರೆಗಳನ್ನು ತಿದ್ದುವಂತಹ ಕೆಲಸ ಮಾಡುತ್ತದೆ. ಎಲ್ಲಾ ಕಲಾ ಪ್ರಕಾರಗಳ ಮೂಲ ಉದ್ದೇಶ ಸಮಾಜದ ಸ್ವಾಸ್ಥ್ಯ ಕಾಪಾಡುವುದಾಗಿದೆ ಎಂದರು.

ಇದೇ ವೇಳೆ ರಂಗಗೀತೆಗಳು, ಭಾರತಾಂಬೆ ನಾಟಕ ಪ್ರದರ್ಶನ ನೆರೆದಿದ್ದ ರಂಗಾಸಕ್ತರನ್ನು ಸೆಳೆದಿಟ್ಟುಕೊಂಡಿತ್ತಲ್ಲದೇ, ಮೆಚ್ಚುಗೆಗೆ ಪಾತ್ರವಾದವು. ಭೂಮಿಕ ರಂಗ ವೇದಿಕೆ ಕಾರ್ಯದರ್ಶಿ ಬಿ.ಟಿ. ಜಾಹ್ನವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ಸತ್ಯಭಾಮ ಮಂಜುನಾಥ, ಖಜಾಂಚಿ ಹೆಚ್.ಎನ್. ಸುಧಾ ಸೇರಿದಂತೆ ಇತರರು ಇದ್ದರು.

Leave a Reply

Your email address will not be published.