ಭತ್ತ ಸಸಿ ನೆಡುತ
ಪದವ ಕಟ್ಟುತ
ಗದ್ದೆಯ ಹಸಿರ ನಡುವೆ ಅರಳಿ
ನಗುತಿವೆ ಚೆಂದದಿ
ಮಂದಸ್ಮಿತ ವದನಗಳು
ಹರುಷ ಪಡಲು ವೃತ್ತಿಯ
ಹಂಗಿಲ್ಲವೆಂದು ಸಾರುತ.
ಹಾರುವ ಹಕ್ಕಿಸಾಲಂತೆ ತೋರುತ
ಕೆಸರ ಗದ್ದೆಯಲಿ ಕಚ್ಚೆದಿರುಸಲಿ
ಕಾಯಕದಿ ನಿರತ ಹೆಂಗಳೆಯರ
ಸಂತಸಕೆ ಎಣೆಯಿಲ್ಲ.
ಹೊತ್ತು ಕಳೆಯುತ ನೆತ್ತಿ ಮೇಲೆ ಸೂರ್ಯ ಬರಲು
ಬುತ್ತಿ ಗಂಟಿನಕಡೆ ಹೊರಳಿದವು
ನಯನಗಳು
ತಂದ ಅನ್ನವ ಕೂಡಿ ತಿಂದು
ತೃಪ್ತಿಗೊಂಡವು ಮನಗಳು.
ನೇಸರ ಜಾರುತ
ಮಸುಕು ಕವಿಯಲು
ಜೋರು ನಡೆಯ ಸದ್ದು
ಹಕ್ಕಿ ಗೂಡು ಸೇರಿ ಅಡವಿ ಹಸುಗಳು ಮನೆಯ ಸೇರಿ
ಕಂದಮ್ಮಗೆ ಹಾಲು ಉಣಿಸಲು.
ದಣಿದ ಗೆಳತಿಯರು
ಧರೆಯ ನಮಿಸಿ ಒಟ್ಟುಗೂಡಿ ಮನೆಯ ಕಡೆ ಧಾವಿಸಲು
ತಾಯಿಯ ಕಂಡ ಮಕ್ಕಳು
ಓಡಿ ತಬ್ಬಿದರು ಮುದದಲಿ.
ತಿಮ್ಮೇಶ್ ಅಣಬೇರು
blgnittur123@gmail.com
Leave a Reply