ವಂಚಕನ ಪಾಲಾದ 86 ಸಾವಿರ

ಕಾರಿನ ಆಸೆಗೆ ಬಿದ್ದ ಶಾಲೆಯ ಅಡುಗೆ ಕೆಲಸದಾಕೆ

ದಾವಣಗೆರೆ, ನ.21- ಆನ್ ಲೈನ್ ಶಾಪಿಂಗ್ ಕಂಪನಿಯ ಅಧಿಕಾರಿ ಸೋಗಿ ನಲ್ಲಿ ಲಕ್ಕಿ ಡ್ರಾ ಮೂಲಕ ಕಾರು ಬಹುಮಾನ ವಾಗಿ ಬಂದಿರುವುದಾಗಿ ನಂಬಿಸಿ ಖಾಸಗಿ ಶಾಲೆಯ ಮಹಿಳಾ ಅಡುಗೆ ಕೆಲಸಗಾರರೋರ್ವರ 86 ಸಾವಿರವನ್ನು ಆನ್ ಲೈನ್ ಮೂಲಕ ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೂದಾಳ್ ರಸ್ತೆಯ ಎಸ್.ಎಂ. ಕೃಷ್ಣ ನಗರದ   ಮಮತ ವಂಚನೆಗೊಳಗಾದವರು. ಕೋಲ್ಕತಾದ ನ್ಯಾಪ್ಟಾಲ್ ಆನ್ ಲೈನ್ ಶಾಪಿಂಗ್ ಕಂಪನಿಯಿಂದ ಮನೆ ವಿಳಾಸಕ್ಕೆ ಹೆಸರಿಗೆ ಬಂದಿದ್ದ ಪತ್ರ ಮತ್ತು ಬಹುಮಾನದ ಕೂಪನ್ ನಲ್ಲಿ ಕಾರು ಬಹುಮಾನವಾಗಿ ಗೆದ್ದಿರುವುದಾಗಿ ಇತ್ತು. ಪತ್ರದಲ್ಲಿನ ಮೊಬೈಲ್ ನಂಬರ್ ಗೆ ಕರೆ ಮಾಡಿದಾಗ ಅಪರಿಚಿತನು ತಾನು ರಾಘವೇಂದ್ರ ಎಂದು ಪರಿಚಯಿಸಿಕೊಂಡು ಕಾರು ಬಹುಮಾನವಾಗಿ ಬಂದಿದ್ದು, ಬೇಡವೆಂದರೆ 14 ಲಕ್ಷದ 80 ಸಾವಿರ ಹಣ ಪಡೆಯಬಹುದೆಂದು ನಂಬಿಸಿದನು. ಹಣ ಪಡೆಯಲು ಶೇ. 1ರಷ್ಟು ಕಮಿಷನ್ ಹಣವಾಗಿ ಮೊದಲು 14 ಸಾವಿರ 800 ಕಟ್ಟುವಂತೆ ತಿಳಿಸಿ ತನ್ನ ಬ್ಯಾಂಕ್ ಖಾತೆ ವಿವರವನ್ನು ವಾಟ್ಸಪ್ ಗೆ ಕಳುಹಿಸಿದ್ದು, ನಂತರ ಪುನಃ ಕರೆ ಮಾಡಿ ಬಹುಮಾನದ ಹಣಕ್ಕೆ 87, 403 ತೆರಿಗೆ ಹಣ ಕಟ್ಟಬೇಕೆಂದನು. 

ಮಮತಾ ಮನೆಯಲ್ಲಿದ್ದ ನಗದನ್ನು ಕಮಿಷನ್ ಹಣವಾಗಿ ಅಪರಿಚಿತ ನೀಡಿದ್ದ ಖಾತೆಗೆ ಜಮಾ ಮಾಡಿದ್ದಾರೆ. ಪುನಹ ಕರೆ ಮಾಡಿ ಸೇವಾ ತೆರಿಗೆ ಕಟ್ಟುವಂತೆ ತಿಳಿಸಿ ದಂತೆ ಮನೆಯಲ್ಲಿದ್ದ 35,400 ನಗದನ್ನು ಎಟಿಎಂ ಮೂಲಕ ಆತನ ಖಾತೆಗೆ ಜಮಾ ಮಾಡಿದ್ದಾರೆ. ಅಲ್ಲದೇ ಪುನಹ 36,200 ತೆರಿಗೆ ಹಣ ಕಟ್ಟುವಂತೆ ತಿಳಿಸಿದಾಗಲೂ ಮನೆಯಲ್ಲಿದ್ದ ಸ್ವಲ್ಪ ನಗದು ಮತ್ತು ಚಿನ್ನಾಭರಣವನ್ನು ಅಡವಿಟ್ಟು ಆ ಹಣವನ್ನು ಹೊಂದಿಸಿ ಜಮಾ ಮಾಡಿದ್ದಾರೆ.

Leave a Reply

Your email address will not be published.