ಪ್ರತಿ ವಾರ್ಡ್‌ನಲ್ಲೂ ಶೀಘ್ರ ವಾಚನಾಲಯ

ಪ್ರತಿ ವಾರ್ಡ್‌ನಲ್ಲೂ ಶೀಘ್ರ ವಾಚನಾಲಯ

ಮಣಿಪಾಲ ಆಸ್ಪತ್ರೆಯಿಂದ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ ಪ್ರಭು ಸ್ವಾಮಿ

ದಾವಣಗೆರೆ, ಸೆ. 7- ಮಹಾನಗರ ಪಾಲಿಕೆ ವತಿಯಿಂದ ನಗರದ 45 ವಾರ್ಡುಗಳಲ್ಲೂ ವಾಚನಾಲಯ ಆರಂಭಿಸಲು ಕಾರ್ಯಪ್ರವೃತ್ತ ರಾಗಿ ರುವುದಾಗಿ ಮಹಾನಗರ ಪಾಲಿಕೆ ಉಪ ಆಯುಕ್ತ ಪ್ರಭು ಸ್ವಾಮಿ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ವರದಿಗಾರರ ಕೂಟ ಹಾಗೂ ಮಣಿಪಾಲ್ ಆಸ್ಪತ್ರೆ ಬೆಂಗಳೂರು ಇವರುಗಳ ಸಂಯುಕ್ತಾಶ್ರ ಯದಲ್ಲಿ ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಕೋವಿಡ್ 19 ನಂತರ ಮೂತ್ರಪಿಂಡ ಆರೈಕೆ ಕುರಿತು ಉಪನ್ಯಾಸ ಹಾಗೂ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಪ್ರತಿ ವಾರ್ಡ್‌ನಲ್ಲೂ ಕಟ್ಟಡ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಪಾಲಿಕೆ ವ್ಯಾಪ್ತಿಯ ಕಟ್ಟಡ ಇರದೇ ಇದ್ದ ಕಡೆ ಬೇರೆ ಕಟ್ಟಡಗಳನ್ನು ಗುರುತಿಸಿ ವಾಚನಾಲಯ ಆರಂಭಿಸಲಾಗುವುದು ಎಂದು ಹೇಳಿದರು.

ಪಾಲಿಕೆಯಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಬಗ್ಗೆಯೂ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಪ್ರಭು ಸ್ವಾಮಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ.ಬಾವಿ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಪ್ರತಿ ವಾರ್ಡ್‌ಗಳಲ್ಲೂ ವಾಚಾನಲಯ ಆರಂಭಿಸುವ ಬಗ್ಗೆ ಹಾಗೂ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಬಗ್ಗೆ ಉಪ ಆಯುಕ್ತರ ಗಮನ ಸೆಳೆದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ಮಾತನಾಡಿ, ಆರೋಗ್ಯ ಕಾರ್ಡ್ ಪಡೆದ ಪತ್ರಕರ್ತರಿಗೆ ಶೇ.20ರಷ್ಟು ರಿಯಾಯಿತಿ ಅತಿ ಕಡಿಮೆಯಾಗಿದ್ದು, ಶೇ.50ರಷ್ಟಾದರೂ ರಿಯಾಯಿತಿ ನೀಡುವ ಬಗ್ಗೆ ಹಾಗೂ ಪತ್ರಕರ್ತರ ಕುಟುಂಬಕ್ಕೂ ಯೋಜನೆ ವಿಸ್ತರಿಸುವ ಬಗ್ಗೆ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಚರ್ಚಿಸುವ ಉದ್ದೇಶವಿರುವುದಾಗಿ ಹೇಳಿದರು.

ಕೆ.ಯು.ಡಬ್ಲು.ಜೆ. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ  ಕೆ.ಚಂದ್ರಣ್ಣ, ಮಣಿಪಾಲ್ ಆಸ್ಪತ್ರೆಯ ವ್ಯವಸ್ಥಾಪಕ ಅರುಣ್ ಚಕ್ರವರ್ತಿ, ಆಸ್ಪತ್ರೆಯ ಜಿಲ್ಲಾ ಪ್ರತಿನಿಧಿ ಅಮಿತ್ ನಾರಾಯಣ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ, ಸಿದ್ದಗಂಗಾ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೋಜಾ ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಹಾರುದ್ರಪ್ಪ ಮೆಣಸಿನಕಾಯಿ ಅವರುಗಳನ್ನು ಸನ್ಮಾನಿಸಲಾಯಿತು.

ವಾರ್ತಾ ಇಲಾಖೆಯ ಬಿ.ಎಸ್. ಬಸವ ರಾಜ್ ಪ್ರಾರ್ಥಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇ.ಎಂ. ಮಂಜುನಾಥ ಮತ್ತು ಖಜಾಂಚಿ ಮಾಗನೂರು ಮಂಜಪ್ಪ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಡಜ್ಜಿ ಸ್ವಾಗತಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ರಾಮ ಪ್ರಸಾದ್ ವಂದಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಈಚೆಗೆ ನಿಧನರಾದ `ಭುವನೇಶ್ವರಿ’ ಸಂಪಾದಕ ನಾ.ಬ. ರುದ್ರಮುನಿ ಮತ್ತು `ಪ್ರಜಾಭಿಮತ’ ಸಂಪಾದಕ ಎಂ.ಎಸ್. ಶಿವಣ್ಣ ಅವರುಗಳ ಆತ್ಮಕ್ಕೆ ಚಿರ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Leave a Reply

Your email address will not be published.